Shri Ramakunjeshwara Residential English Medium High School, Ramakunja

Latest News

ರಾಮಕುಂಜ: ಆನ್‌ಲೈನ್‌ ತರಗತಿ ಆರಂಭ

ದೇಶದಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರಕಾರ ಲಾಕ್‌ಡೌನ್ ಜಾರಿಗೊಳಿಸಿತು. ಇದರಿಂದಾಗಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದ 15 ದಿನದ ಮೊದಲೇ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ನೀಡಲಾಗಿತ್ತು. ಎಪ್ರಿಲ್ ತಿಂಗಳಿನಲ್ಲಿ ನಡೆಯುವ ಬೇಸಿಗೆ ಶಿಬಿರಗಳೂ ನಡೆಯಲಿಲ್ಲ. ಮಕ್ಕಳು ಮನೆಯೊಳಗೆಯೇ ಸೇರಿಕೊಳ್ಳಬೇಕಾದ ಪ್ರಮೇಯ ಒದಗಿ ಬಂದಿತ್ತು. ಇದರಿಂದಾಗಿ ಕಳೆದ 40-45 ದಿನಗಳಿಂದ ವಿದ್ಯಾರ್ಥಿಗಳು ತಮ್ಮ ಶಾಲೆಯಿಂದ ದೂರವೇ ಉಳಿದಿದ್ದಾರೆ. ಬಹುತೇಕ ಮಕ್ಕಳು ಪುಸ್ತಕದೊಂದಿಗಿನ ತಮ್ಮ ಸಂಬಂಧವನ್ನೇ ಕಡಿತಗೊಳಿಸಿದ್ದಾರೆ. ಮಕ್ಕಳ ಶೈಕ್ಷಣಿಕ ಚಟುವಟಿಕೆ ಪುನರಾರಂಭಿಸುವ ನಿಟ್ಟಿನಲ್ಲಿ ರಾಮಕುಂಜ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆನ್‌ಲೈನ್ ತರಗತಿ ಆರಂಭಿಸಲಾಗಿದೆ.

ರಾಮಕುಂಜ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 1 ರಿಂದ 10ನೇ ತರಗತಿ ತನದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಆರಂಭಿಸಲಾಗಿದೆ. ಕಳೆದ 1 ವಾರದಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ತರಗತಿ ನಡೆಯುತ್ತಿದ್ದು ವಿದ್ಯಾರ್ಥಿಗಳಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮಕ್ಕಳು ತಮ್ಮ ಪೋಷಕರ ಮೊಬೈಲ್‌ನಲ್ಲಿ ಝೂಮ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಮೂಲಕ ಮನೆಯಲ್ಲಿಯೇ ಉಳಿದುಕೊಂಡು ತರಗತಿಗೆ ಹಾಜರಾಗಬಹುದಾಗಿದೆ. ಸಣ್ಣ ಮಕ್ಕಳ ಜೊತೆಗೆ ಪೋಷಕರೂ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸುತ್ತಿದ್ದಾರೆ. ಶಿಕ್ಷಕರೂ ತಮ್ಮ ಮನೆಯಿಂದಲೇ ಆನ್‌ಲೈನ್ ತರಗತಿ ನಡೆಸುತ್ತಿದ್ದಾರೆ. ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬ ಶಿಕ್ಷಕರಿಗೆ ಜವಾಬ್ದಾರಿ ನೀಡಲಾಗಿದೆ. ವಾರದ ಆರು ದಿನವೂ ಪ್ರತಿ ದಿನ 30 ರಿಂದ 45 ನಿಮಿಷ ಆನ್ ಲೈನ್ ತರಗತಿ ನಡೆಯುತ್ತಿದೆ. ಇದರೊಂದಿಗೆ ಮಕ್ಕಳಿಗೆ ಹೋಮ್‌ವರ್ಕ್ ಸಹ ನೀಡಲಾಗುತ್ತಿದೆ. ರಜೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯಿಂದ ದೂರ ಉಳಿಯಬಾರದೆಂಬ ದೃಷ್ಟಿಯನ್ನಿಟ್ಟುಕೊಂಡು ಸಂಸ್ಥೆಯಲ್ಲಿ ಆನ್‌ಲೈನ್ ತರಗತಿ ಆರಂಭಿಸಲಾಗಿದೆ. ಮಕ್ಕಳೂ ಆನ್‌ಲೈನ್ ತರಗತಿಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ.

ಹೊಸ ಅನುಭವ:
ಕೊರೋನಾ ಮಹಾಮಾರಿ ಹರಡದಂತೆ ಜಾರಿಗೊಂಡಿರುವ ಕೇಂದ್ರ, ರಾಜ್ಯ ಸರಕಾರಗಳ ನಿಯಮಗಳ ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ದೀರ್ಘಾವದಿಯ ರಜೆಯಿಂದಾಗಿ ಮಕ್ಕಳೂ ಶೈಕ್ಷಣಿಕ ಚಟುವಟಿಕೆಯಲ್ಲೂ ಹಿಂದೆ ಬೀಳುವ ಸಾಧ್ಯತೆ ಇದೆ. ಇದನ್ನೆಲ್ಲಾ ಮನಗಂಡು ರಾಮಕುಂಜ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಡಳಿತ ಮಂಡಳಿ ಆನ್‌ಲೈನ್ ತರಗತಿ ಆರಂಭಿಸಿದೆ. ಸದಾ ತರಗತಿಯಲ್ಲಿ ಶಿಕ್ಷಕರ ಜೊತೆಗೆ ಪಾಠ ಪ್ರವಚನದಲ್ಲಿ ತೊಡಗಿಕೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಉಳಿದುಕೊಂಡು ಪಾಠ ಕೇಳುವುದು ಹೊಸ ಅನುಭವವಾಗಿದೆ. ಮನೆಯಲ್ಲಿ ಉಳಿದುಕೊಂಡು ಆನ್‌ಲೈನ್ ತರಗತಿ ಮಾಡುತ್ತಿರುವುದು ಶಿಕ್ಷಕರಿಗೂ ಹೊಸ ಅನುಭವವಾಗಿದೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಂಸ್ಥೆ ಆರಂಭಿಸಿರುವ ಆನ್‌ಲೈನ್ ತರಗತಿಗೆ ಉತ್ತಮ ಸ್ಪಂದನೆ ವ್ಯಕ್ತಗೊಂಡಿದೆ.

1 ರಿಂದ 10ನೇ ತರಗತಿಯ ತನಕದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಆರಂಭಿಸಿದ್ದೇವೆ. 40 ನಿಮಿಷ ತರಗತಿ ನಡೆಯುತ್ತಿದೆ. ದೀರ್ಘ ರಜೆಯ ಅವಧಿಯಲ್ಲಿ ಮಕ್ಕಳು ಪಠ್ಯ ಚಟುವಟಿಕೆಗಳಿಂದ ದೂರು ಉಳಿಯುತ್ತಾರೆ. ಇದನ್ನು ಮನಗಂಡು ಪಠ್ಯ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಉದ್ದೇಶದಿಂದ ಆನ್‌ಲೈನ್ ತರಗತಿ ಆರಂಭಿಸಿದ್ದೇವೆ. ಸಣ್ಣ ಮಕ್ಕಳ ಜೊತೆ ಅವರ ಪೋಷಕರೂ ಭಾಗವಹಿಸುತ್ತಿದ್ದಾರೆ. ಮಕ್ಕಳು, ಶಿಕ್ಷಕರು ಮನೆಯಲ್ಲಿಯೇ ಉಳಿದುಕೊಂಡು ಆನ್‌ಲೈನ್ ತರಗತಿ ನಡೆಸುತ್ತಿದ್ದಾರೆ

ಸೇಸಪ್ಪ ರೈ, ಕಾರ್ಯದರ್ಶಿ ಶ್ರೀ ರಾಮಕುಂಜೇಶ್ವರ ಆ.ಮಾ.ಪ್ರೌಢಶಾಲೆ, ರಾಮಕುಂಜ